14 ವರ್ಷಗಳ ಹಿಂದೆ ತೆರೆಕಂಡು ಇತಿಹಾಸವನ್ನೇ ಸೃಷ್ಟಿಸಿದ ‘ಮುಂಗಾರು ಮಳೆ’ ಚಿತ್ರ ಮಾಡಿದ ಜಾದೂ ಅಸಾಮಾನ್ಯ. ಕನ್ನಡ ಚಿತ್ರರಂಗದಲ್ಲಿ (ಚಂದನವನದಲ್ಲಿ) ಹೊಸ ಟ್ರೆಂಡ್ ಸೃಷ್ಟಿಸಿದ್ದ ಚಿತ್ರ ಅಂದ್ರೆ ಅದು 2006 ರಲ್ಲಿ ಮುಂಗಾರು ಮಳೆ ಸಾಕಷ್ಟು ವಿಶೇಷತೆಗಳನ್ನು ಹೊಂದಿದ್ದ ಮುಂಗಾರು ಮಳೆ ಸಿನಿಮಾ ದೊಡ್ಡ ಮಟ್ಟದಲ್ಲಿ ಸೂಪರ್ ಹಿಟ್ ಆಯಿತು.
ಅದು 2006ರ ಡಿಸೆಂಬರ್.29 ರಂದು ಗಣೇಶ್ ಅಭಿನಯದ ‘ಮುಂಗಾರು ಮಳೆ’ ಚಿತ್ರ ರಾಜ್ಯಾದ್ಯಂತ ತೆರೆಕಂಡಿತು. ಈ ದಿನ ಇಂಥದ್ದೊಂದು ದೊಡ್ಡ ಮ್ಯಾಜಿಕ್ ನಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಮೂಡಿಬಂದಿದ್ದ ಮುಂಗಾರು ಮಳೆ ಸಿನೆಮಾ ಸಂಪೂರ್ಣ ಹೊಸತನದಿಂದ ಕೂಡಿತ್ತು. ಹಾಗಾಗಿ ಪ್ರೇಕ್ಷಕರ ಮನಸೋತರು. ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನೋಡುತ್ತಿದ್ದಂತೆಯೇ ಎಲ್ಲೆಡೆ ಹೌಸ್ ಫುಲ್ ಬೋರ್ಡ್ ಕಾಣಿಸಲು ಆರಂಭವಾಯಿತು.
ಸ್ಯಾಂಡಲ್‌ವುಡ್‌ನಲ್ಲಿ ಟ್ರೆಂಡ್ ಸೃಷ್ಟಿಸಿದ ಮುಂಗಾರು ಮಳೆ ಚಿತ್ರದ ಗೆಲುವಿಗೆ ಕಾರಣವಾದ ಅಂಶಗಳೇನು?
1 ) ಹೊಸ ಜೋಡಿ ಗಣೇಶ್-ಪೂಜಾ ಗಾಂಧಿ
ಮುಂಗಾರು ಮಳೆ ಸಿನಿಮಾ ಮೂಲಕ ನಟಿ ಪೂಜಾ ಗಾಂಧಿ ಅವರು ಸ್ಯಾಂಡಲ್‌ವುಡ್‌ಗೆ ಪರಿಚಿತರಾದರು. ಪೂಜಾ ಗಾಂಧಿ ಮತ್ತು ಗಣೇಶ್ ಜೋಡಿ ಪ್ರೇಕ್ಷಕರಿಗೆ ಸಖತ್ ಇಷ್ಟವಾಯಿತು. ಇಬ್ಬರ ಕೆಮಿಸ್ಟ್ರಿ ತುಂಬ ಚೆನ್ನಾಗಿ ಮೂಡಿಬಂದಿತ್ತು. ನಾಯಕಿ ಪಾತ್ರಕ್ಕೆ ನಿರ್ದೇಶಕರು ಕಥೆಯಲ್ಲಿ ಹೆಚ್ಚು ಮಹತ್ವ ನೀಡಿದ್ದು ಕಂಡು ಬರುತ್ತೆ. ಗಣೇಶ್ ಅವರ ಮ್ಯಾನರಿಸಂ ಕೂಡ ಸಕ್ಕತ್ ಫ್ರೆಶ್ ಆಗಿತ್ತು. ಈ ಮುಂಗಾರು ಮಳೆ ಸಿನಿಮಾದ ಯಶಸ್ಸಿನಿಂದಾಗಿ ಗೋಲ್ಡನ್ ಸ್ಟಾರ್ ಗಣೇಶ್ ಅವರು ಕರ್ನಾಟಕದಲ್ಲಿ ಸ್ಟಾರ್ ನಟನಾಗಿ ಹೊರಹೊಮ್ಮಿದರು. ಪೂಜಾ ಗಾಂಧಿಯು ಸಹ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು ಹಲುವಾರು ಸಿನಿಮಾ ಆಫರ್‌ಗಳು ಸಹ ಸಿಕ್ಕವು.
2 ) ಪ್ರೇಕ್ಷಕರ ಮನಸೆಳೆದ ಹಾಡುಗಳು
ಮುಂಗಾರು ಮಳೆ ಸಿನೆಮಾದ ಹಾಡುಗಳು ಮನೋಮೂರ್ತಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿದ್ದವು. ಕವಿರಾಜ್, ಹೃದಯಶಿವ, ಜಯಂತ ಕಾಯ್ಕಿಣಿ, ಯೋಗರಾಜ್ ಭಟ್ ಬರೆದ ತಾಜಾ ಸಾಹಿತ್ಯಕ್ಕೆ ಸೋನು ನಿಗಮ್, ಶ್ರೇಯಾ ಘೋಷಾಲ್, ಉದಿತ್ ನಾರಾಯಣ್, , ಸುನಿಧಿ ಚವ್ಹಾಣ್, ಹೇಮಂತ್ ಕುಮಾರ್, ಹೇಮಂತ್ ಕುಮಾರ್ ತಮ್ಮ ಮಧುರ ಕಂಠದಿಂದ ಜೀವ ತುಂಬಿದರು. ಅದರಲ್ಲೂ ‘ಅನಿಸುತಿದೆ ಯಾಕೋ ಇಂದು…’ ಹಾಡು “ಸಾರ್ವಕಾಲಿಕ ಎವರ್ ಗ್ರೀನ್ ಹಿಟ್” ಗೀತೆಯಾಗಿ ಹೊರಹೊಮ್ಮಿತು.
3 ) ನಶೆ ಏರಿಸಿದ ಸಕ್ಕತ್ ಡೈಲಾಗ್‌ಗಳು
ಇಡೀ ಸಿನಿಮಾದಲ್ಲಿ ಹೊಸ ಶೈಲಿಯ ಡೈಲಾಗ್‌ಗಳು ಮತ್ತೇರಿಸುವಂತೆ ಇದ್ದವು. ಅದಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ತಮ್ಮದೇ ಸ್ಟೈಲ್ ನಲ್ಲಿ ಮತ್ತಷ್ಟು ಮೆರುಗು ನೀಡಿದ್ದರು. ಅದರಲ್ಲೂ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪೂಜಾ ಗಾಂಧಿ ನಡುವಿನ ಸಂಭಾಷಣೆಗಳು ಪ್ರೇಕ್ಷಕರಿಗೆ ಕಂಠಪಾಠ ಆಗುವ ಮಟ್ಟಕ್ಕೆ ಜನಪ್ರಿಯವಾದವು.
4) ಜಾದೂ ಮಾಡಿದ ಛಾಯಾಗ್ರಹಣ
‘ಮುಂಗಾರು ಮಳೆ’ ಟೈಟಲ್ ತಕ್ಕಂತೆಯೇ ಈ ಸಿನಿಮಾವನ್ನು ಮಳೆಗಾಲದಲ್ಲಿ / ಮಳೆಯ ನಡುವೆ ಶೂಟಿಂಗ್ ಮಾಡಲಾಗಿತ್ತು. ಮಲೆನಾಡಿನ ಸಹಜ ಮಳೆಯಲ್ಲಿ ದೃಶ್ಯಗಳನ್ನು ಸೆರೆಹಿಡಿಯಲು ಚಿತ್ರತಂಡ ಸಾಕಷ್ಟು ಹರಸಾಹಸ ಪಟ್ಟಿತು. ಅದರ ಫಲವಾಗಿ ಪ್ರತಿ ದೃಶ್ಯಗಳು ಕೂಡ ಸುಂದರವಾಗಿ ಅದ್ಭುತವಾಗಿ ಮೂಡಿಬಂದಿತ್ತು. ಛಾಯಾಗ್ರಾಹಕ ಎಸ್. ಕೃಷ್ಣ. ಅವರು ಜೋಗ ಜಲಪಾತವನ್ನು ನಯನಮನೋಹರವಾಗಿ ಚಿತ್ರಿಸಿದ್ದರು. ಇಂತಹ ಹಲುವಾರು ಕಾರಣಗಳಿಂದಾಗಿ ಮುಂಗಾರು ಮಳೆ ಸಿನಿಮಾ ಸೂಪರ್ ಹಿಟ್ ಆಯಿತು. ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆದ ಮುಂಗಾರು ಮಳೆ ಚಿತ್ರ ತೆರೆಕಂಡು ಇದೀಗ 14 ವರ್ಷ ಪೂರೈಸಿದೆ.