ನಿಮ್ಮದೇ ರಾಜ್ಯದಲ್ಲಾದ ದುರಂತ ಕಾಣದಷ್ಟು ಅಂಧಕಾರ ಕವಿದಿತ್ತೇ?: ಬಿಎಲ್ ಸಂತೋಷ್‌ಗೆ ದಿನೇಶ್ ಗುಂಡೂರಾವ್ ತರಾಟೆ

 

ನಿಮ್ಮದೇ ರಾಜ್ಯದಲ್ಲಾದ ದುರಂತ ಕಾಣದಷ್ಟು ಅಂಧಕಾರ ಕವಿದಿತ್ತೇ?: ಬಿಎಲ್ ಸಂತೋಷ್‌ಗೆ ದಿನೇಶ್ ಗುಂಡೂರಾವ್ ತರಾಟೆ

ದೇಶದಲ್ಲಿ ಆಕ್ಸಿಜನ್ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಕೇಂದ್ರ ಸರಕಾರ ನೀಡಿರುವ ಹೇಳಿಕೆಯನ್ನು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ. ಕೇಂದ್ರವು ಹಸಿಸುಳ್ಳು ಹೇಳಿದೆ ಎಂದು ಆರೋಪಿಸಿದ್ದಾರೆ..

ಬೆಂಗಳೂರು: ಕೊರೊನಾ ವೈರಸ್ ಎರಡನೆಯ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂಬ ಹೇಳಿಕೆ ನೀಡಿರುವ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಹರಿಹಾಯ್ದಿದ್ದಾರೆ.

‘ಕೊರೊನಾ 2ನೇ ಅಲೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿದ ವರದಿಯಿಲ್ಲ ಎಂದು ಕೇಂದ್ರ ಸಂಸತ್ತಿನಲ್ಲಿ ಹಸಿ ಸುಳ್ಳು ಹೇಳಿದೆ. ಮಾನಗೆಟ್ಟ ಸರ್ಕಾರ ಮಾತ್ರ ಜನರ ಸಾವಿನ ವಿಚಾರದಲ್ಲಿ ಈ ರೀತಿ ಸುಳ್ಳು ಹೇಳಲು ಸಾಧ್ಯ. ಕೇಂದ್ರದ ಸುಳ್ಳು ಬಯಲು ಮಾಡಲು ಚಾಮರಾಜನಗರದ ದುರಂತವೊಂದೇ ಸಾಕಲ್ಲವೇ? ಕೇಂದ್ರದ ಭಂಡತನಕ್ಕೆ ಇನ್ನೇನು ಸಾಕ್ಷಿ ಬೇಕು?’ ಎಂದು ಕಿಡಿಕಾರಿದ್ದಾರೆ.

‘ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿಲ್ಲ ಎಂಬ ಕೇಂದ್ರದ ನಿಲುವನ್ನು ಸಮರ್ಥಿಸಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರು ಸಾವಿನ ಬಗ್ಗೆ ರಾಜ್ಯ ಸರ್ಕಾರದ ಬಳಿ ಕೇಳಿ ತಿಳಿಯಲು ಉಪದೇಶಿಸಿದ್ದಾರೆ. ಸ್ವಾಮಿ, ಸಂತೋಷ್‌ರವರೇ, ನೀವು ಕರ್ನಾಟಕದವರು, ನಿಮ್ಮದೇ ರಾಜ್ಯದ ಚಾಮರಾಜನಗರ ದುರಂತ ನಿಮ್ಮ ಕಣ್ಣಿಗೆ ಕಾಣದಷ್ಟು ಅಂಧಕಾರ ಕವಿದಿತ್ತೆ?’ ಎಂದು ಪ್ರಶ್ನಿಸಿದ್ದಾರೆ.

‘ಕೇವಲ ಆಕ್ಸಿಜನ್ ಕೊರತೆಯ ಸಾವೊಂದೇ ಅಲ್ಲ, ಕೊರೊನಾ ಸಾವಿನ ಲೆಕ್ಕದಲ್ಲೂ ಕೇಂದ್ರ ಭಯಾನಕ ಸುಳ್ಳು ಹೇಳಿದೆ. ಅಂತರಾಷ್ಟ್ರೀಯ ಅಧ್ಯಯನ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಭಾರತದಲ್ಲಿ 4 ಲಕ್ಷದ ಬದಲು 30-40 ಲಕ್ಷ ಜನ ಸತ್ತಿರುವುದಾಗಿ ಹೇಳಿದೆ. ಕೊರೊನಾ ಈ ದೇಶದ ಮಾನವ ದುರಂತವೊಂದೇ ಅಲ್ಲ, ಅದು ಕೇಂದ್ರ ನಡೆಸಿದ ಸಾಮೂಹಿಕ ಹತ್ಯಾಕಾಂಡ ಕೂಡ ಹೌದು’ ಎಂದು ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಬಿಎಲ್ ಸಂತೋಷ್ ಸಮರ್ಥನೆ

ಕೊರೊನಾ ಸಂಬಂಧಿ ಸಾವುಗಳ ಲೆಕ್ಕ ನೀಡುವುದು ರಾಜ್ಯ ಸರಕಾರಗಳ ಜವಾಬ್ದಾರಿ. ಈವರೆಗೂ ಯಾವುದೇ ರಾಜ್ಯಗಳು ಆಕ್ಸಿಜನ್ ಕೊರತೆಯಿಂದ ಸಾವು ಸಂಭವಿಸಿರುವ ಬಗ್ಗೆ ವರದಿ ನೀಡಿಲ್ಲ ಎಂದು ಸಂಸತ್‌ನಲ್ಲಿ ಕೇಂದ್ರ ಸರಕಾರ ಹೇಳಿತ್ತು. ಇದರ ವಿರುದ್ಧ ವಿರೋಧಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದ್ದಾಗ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಸಮರ್ಥಿಸಿಕೊಂಡಿದ್ದರು.

‘ಆಕ್ಸಿಜನ್ ಕೊರತೆಯಿಂದ ಉಂಟಾದ ಸಾವುಗಳ ಅಂಕಿ ಅಂಶಕ್ಕಾಗಿ ನಿಮ್ಮ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರನ್ನು ಕೇಳಿ. ರಾಜ್ಯಗಳು ಕಳಿಸಿದ್ದನ್ನಷ್ಟೇ ಕೇಂದ್ರ ಸರಕಾರ ಹೇಳಿದೆ’ ಎಂದು ಆಕ್ಸಿಜನ್ ಕೊರತೆಯಿಂದ ಯಾರೂ ಸತ್ತಿಲ್ಲ ಎಂಬ ಹೇಳಿಕೆ, ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡವರ ಕುಟುಂಬದವರ ಮೇಲೆ ಯಾವ ಪರಿಣಾಮ ಬೀರಬಹುದು? ಕೇಂದ್ರದ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದ ಶಿವಸೇನಾ ಮುಖಂಡ ಸಂಜಯ್ ರಾವತ್ ಅವರಿಗೆ ಬಿಎಲ್ ಸಂತೋಷ್ ಪ್ರತಿಕ್ರಿಯೆ ನೀಡಿದ್ದರು.

‘ಕೃತಕ ಆಕ್ಸಿಜನ್ ಕೊರತೆ ಸೃಷ್ಟಿಸಿ ನ್ಯಾಯಾಲಯಗಳನ್ನು ತಪ್ಪು ದಾರಿಗೆ ಎಳೆದಿದ್ದಕ್ಕಾಗಿ ನ್ಯಾಯಾಧೀಶರಿಂದ ತರಾಟೆಗೆ ಒಳಗಾದ ಬಳಿಕ ಆಮ್ ಆದ್ಮಿ ಪಕ್ಷವೇ ಇದಕ್ಕೆ ಉತ್ತರಿಸಬೇಕು. ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ಯಾವುದೇ ಸಾವುಗಳ ಬಗ್ಗೆ ನಿಮ್ಮ ಸರಕಾರ ವರದಿ ನೀಡಿದೆಯೇ?’ ಎಂದು ದಿಲ್ಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರನ್ನು ಬಿಎಲ್ ಸಂತೋಷ್ ಪ್ರಶ್ನಿಸಿದ್ದರು.


Leave a Reply

Your email address will not be published. Required fields are marked *